ಯಜ್ಞಶ್ರೀ ಸಾತಕರ್ಣಿ -
ಸಾತವಾಹನರ ಒಬ್ಬ ಪ್ರಸಿದ್ಧ ರಾಜ, ಸಾತವಾಹನರ ಇತಿಹಾಸ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ ವಾದುದರಿಂದ ವಿದ್ವಾಂಸರ ಅಭಿಪ್ರಾಯಗಳು ಭಿನ್ನಭಿನ್ನವಾಗಿವೆ. ಮತ್ಸ್ಯ ಹಾಗೂ ವಾಯುಪುರಾಣಗಳಲ್ಲಿ ಸಾತವಾಹನರ ಚರಿತ್ರೆ ಬಂದಿದ್ದು ಅದು ಏಕ ಪ್ರಕಾರವಾಗಿಲ್ಲ. ಕೆಲವು ನಾಣ್ಯಗಳು, ಶಾಸನಗಳು ದೊರೆತಿದ್ದು ಇವರ ಚರಿತ್ರೆಯನ್ನು ರಚಿಸಲು ಸಹಾಯಕವಾಗಿವೆ. ಮತ್ಸ್ಯ ಹಾಗೂ ವಾಯುಪುರಾಣಗಳಲ್ಲಿ ಯಜ್ಞಶ್ರೀ ಸಾತಕರ್ಣಿ ರಾಜನ ಹೆಸರು ದೊರೆಯುತ್ತಿದ್ದು ಆತ 29 ವರ್ಷ ರಾಜ್ಯವಾಳಿದನೆಂದು ತಿಳಿಯುತ್ತದೆ. ಮತ್ಸ್ಯಪುರಾಣದಲ್ಲಿ ಗೋತಮಿಪುತ್ರನ ತರುವಾಯ ಪುಲೋಮತ್ 9ಪುಳುಮಾವಿ) ಶಿವಶ್ರೀ, ಶಿವಸ್ಕಂದ ಇವರ ಅನಂತರ ಯಜ್ಞಶ್ರೀ ಹೆಸರು ಬಂದಿದೆ. ವಾಯುಪುರಾಣದಲ್ಲಿ ಗೋತಮಪತ್ರನ (ಗೌತಮೀಪುತ್ರ) ಹೆಸರಾದ ಕೂಡಲೇ ಯಜ್ಞಶ್ರೀ ರಾಜನ ಉಲ್ಲೇಖ ಬಂದಿದೆ. ಗೋತಮಪುತ್ರನ ಅನಂತರ ಯಜ್ಞಶ್ರೀ ಬಹಳ ಪ್ರಸಿದ್ದನೆಂಬುದು ಇದರಿಂದ ವಿಧಿತವಾಗುತ್ತದೆ. ಈತನನ್ನು ಸೋಮಯಾಜಿನ್ ಎಂದು ವರ್ಣಿಸಿದೆ.

	ಯಜ್ಞಶ್ರೀಯ ರಾಜ್ಯ ಸಿರಿಸಂಪತ್ತಿನಿಂದ ತುಂಬಿ ತುಳುಕುತ್ತಿತ್ತೆಂದು ಕಾಥೇವಾಡ, ಗುಜರಾತ್‍ಗಳಲ್ಲಿ ದೊರೆಕಿದ ನಾಣ್ಯಗಳ ವಿಪುಲತೆಯಿಂದ ಗುರುತಿಸಲಾಗಿದೆ. ವಾಣಿಜ್ಯ, ವ್ಯಾಪಾರ, ಅನೇಕ ದೇಶಗಳೊಂದಿಗೆ ಸಂಪರ್ಕ ಹೊಂದಿದ್ದನ್ನು ಸೂಚಿಸುತ್ತದೆ. ಗಿರ್ನಾರ್‍ನಲ್ಲಿ ದೊರೆತಿರುವ ರುದ್ರದಾಮನ್ ದೊರೆಯ ಶಾಸನದಿಂದ ಈತ, ಯಜ್ಞಶ್ರೀಯದ್ದಾಗಿದೆ. ಕಾನ್ಹೆರಿಯಲ್ಲಿ ದೊರೆತ ಒಂದು ಶಾಸನ ಯಜ್ಞಶ್ರೀ ಸಾತಕರ್ಣೀಯ 16ನೆಯ ವರ್ಷದ್ದಾಗಿದೆ. ರುದ್ರದಾಮನಿಂದ ಸೋತ ಇತ ಪೂರ್ಣ ದಕ್ಷಿಣಾಪಥದ ರಾಜನಾಗಿರದೆ ಒಬ್ಬ ಮಾಂಡಲಿಕನಾಗಿ ದಕ್ಷಿಣದ ಆಂಧ್ರದಲ್ಲಿ ಆಳಿದ. ಈತನ ಶಾಸನವೊಂದು ಗುಂಟೂರು ಜಿಲ್ಲೆಯ ರೇಪಲ್ಲಿ ತಾಲ್ಲೂನಿನ ಚಿನ್ನ ಎಂಬ ಗ್ರಾಮದಲ್ಲಿ ದೊರಕಿದೆ.

	ಯಜ್ಞಶ್ರೀ ಸಾತಕರ್ಣಿಯ ಉಲ್ಲೇಖವು ನಾಸಿಕ. ಕಾನ್ಹೇರಿ ಹಾಗೂ ಚಿನ್ನ ಗಂಜಾಮ್ (ಚಿನ್ನ) ಶಾಸನಗಳಲ್ಲಿ ಇದೆ. ಈತನ ನಾಣ್ಯಗಳು ಅಪರಾಂತ, ದಕ್ಷಿಣ ಮಹಾರಾಷ್ಟ್ರ, ವಿದರ್ಭ ಹಾಗೂ ಆಂದ್ರ ಪ್ರದೇಶ ಕೋರಮಂಡಲ ಕಿನಾರೆಯಲ್ಲಿ ಉಪಲಬ್ದವಾಗಿವೆ. ಈತನ ನಾಣ್ಯದ ಮೇಲೆ ಹಡಗಿನ ಚಿತ್ರವಿದ್ದು ಕಡಲಾಚೆಗಿನ ಸಂಪರ್ಕವನ್ನು ಸೂಚಿಸುತ್ತದೆ. ಈತನ ಅನಂತರ ಪಟ್ಟಕ್ಕೆ ಬಂದ ವಿಜಯ, ಚಂಡಶ್ರೀ ಮತ್ತು ಮೂರನೇಯ ಪುಳುಮಾವಿ ಇವರಾರೂ ಅಷ್ಟು ಮಹತ್ತ್ವದ ವ್ಯಕ್ತಿಗಳಾಗಿರಲಿಲ್ಲ. ಕಳೆದುಹೋದ ಸಾಮ್ರಾಜ್ಯವನ್ನು ಪುನಃ ಸಂಪಾದಿಸಿ ಸ್ಥಾಪಿಸಲಿಲ್ಲ. ಯಜ್ಞಶ್ರೀಯ ಹಿರಿಮೆಗರಿಮೆಯೇ ಸಾತವಾಹನ ವಂಶದ ಕೊನೆಯ ದನಿಯಾಯಿತು.
			

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
								(ಎಸ್.ಎಸ್.ಜೆಎ.)